ರಾಜ್ಯ

ಅಪಾಯಕಾರಿ ಅವೈಜ್ಞಾನಿಕ ನಿಯಮಬಾಹಿರ ತಂಗುದಾಣಗಳ ವಿರುದ್ಧ ಒಕ್ಕೂಟದ ಮನವಿ

ಸುದ್ದಿಲೈವ್. ಕಾಂ/ಶಿವಮೊಗ್ಗ

ಸ್ಮಾರ್ಟ್ ಸಿಟಿಯವರು ನಿರ್ಮಿಸಿರುವ 108 ಬಸ್ ಪ್ರಯಾಣಿಕರ ತಂಗುದಾಣಗಳಲ್ಲಿ ಪ್ರಯಾಣಿಕರಿಗೆ ತೀವ್ರ ಅನಾನುಕೂಲ ಉಂಟಾಗುತ್ತಿದ್ದು, ನಗರದ ರಕ್ಷಣಾ ವ್ಯವಸ್ಥೆಗೆ ಸವಾಲಾಗಿದ್ದು, ಸೂಕ್ತ ಕ್ರಮಕ್ಕೆ ಆಗ್ರಹಿಸಿ ಶಿವಮೊಗ್ಗ ನಾಗರಿಕ ಹಿತರಕ್ಷಣಾ ವೇದಿಕೆಗಳ ಒಕ್ಕೂಟದಿಂದ ಜಿಲ್ಲಾ ಪೊಲೀಸ್ ಅಧೀಕ್ಷಕರಿಗೆ ಮನವಿ ಸಲ್ಲಿಸಲಾಯಿತು.

ಸ್ಮಾರ್ಟ್ ಸಿಟಿಯವರು ನಗರದಾದ್ಯಂತ ಬಸ್ ಪ್ರಯಾಣಿಕರ ತಂಗುದಾಣಗಳನ್ನು ನಿರ್ಮಿಸಿದ್ದು, ಅವು ಅವೈಜ್ಞಾನಿಕವಾಗಿವೆ. ಅಪಾಯಕಾರಿಯಾಗಿ ಪ್ರಯಾಣಿಕರ ಮಾಹಿತಿ ಬೋರ್ಡ್‌ಗಳ ಜೋಡಣೆ ಯಾಗಿದ್ದು, ಬಿ.ಹೆಚ್. ರಸ್ತೆ, ಸಾಗರ ರಸ್ತೆ, 100 ಅಡಿ ರಸ್ತೆ ಮುಂತಾದ ಕಡೆಗಳಲ್ಲಿ ತಂಗುದಾಣಗಳಲ್ಲಿ ಪ್ರಯಾಣಿಕರ ಮಾಹಿತಿ ಬೋರ್ಡ್ ಗಳನ್ನು ಅಳವಡಿಸಲಾಗಿದ್ದು, ಬಹುತೇಕ ಕಡೆ ಪ್ರಯಾಣಿಕರು ಈ ಬಸ್ ತಂಗುದಾಣಗಳಿಗೆ ಹತ್ತುವ ಮತ್ತು ಇಳಿಯುವ ಜಾಗದಲ್ಲೇ ಬೋರ್ಡ್ ಅಳವಡಿಸಿದೆ.

ತುಂಬಾ ಕಡಿಮೆ ಎತ್ತರದಲ್ಲಿ ಬೋರ್ಡ್ ಅಳವಡಿಸಿರು ವುದರಿಂದ ಪ್ರಯಾಣಿಕರ ತಲೆಗೆ ತಾಗುತ್ತಿದ್ದು, ಸುಗಮ ಓಡಾಟಕ್ಕೆ ತೊಂದರೆಯಾಗಿದೆ. ಅನೇಕರಿಗೆ ಪೆಟ್ಟು ಬಿದ್ದು, ಗಾಯಗಳಾಗಿವೆ. ಕೂಡಲೇ ಈ ಮಾಹಿತಿ ಬೋರ್ಡ್‌ಗಳನ್ನು ತೆರವು ಗೊಳಿಸಬೇಕು ಎಂದು ಆಗ್ರಹಿಸಿದರು.

ಹಲವಾರು ತಂಗುದಾಣಗಳಲ್ಲಿ ರಾಷ್ಟ್ರೀಯ ಹೆದ್ದಾರಿಗಿಂತ ಎತ್ತರ ಹೆಚ್ಚಾಗಿದ್ದು, ನಿಯಮಬಾಹಿರ ವಾಗಿವೆ. ವಯೋವೃದ್ಧರು, ವಿಕಲಚೇತನರು ತಂಗುದಾಣ ಪ್ರವೇಶಿಸುವುದು ಅಸಾಧ್ಯವಾಗಿದೆ. ನಗರದ ಲಕ್ಷ್ಮಿ ಟಾಕೀಸ್, ಮೀನಾಕ್ಷಿ ಭವನ, ಸೈನ್ಸ್ ಮೈದಾನ, ಎಪಿಎಂಸಿ ಎದುರು ಅವೈಜ್ಞಾನಿಕವಾಗಿ ಬಸ್ ಪ್ರಯಾಣಿಕರ ತಂಗುದಾಣ ನಿರ್ಮಿಸಿದ್ದು, ಇವನ್ನು ಪುನರ್ ನಿರ್ಮಾಣ ಮಾಡಲು ಸ್ಮಾರ್ಟ್ ಸಿಟಿ ವಿಭಾಗದವರಿಗೆ ಸೂಚಿಸಬೇಕು. ಅನುಮೋದಿತ ನಕ್ಷೆಯ ಪ್ರಕಾರ ಎರಡು ಬದಿಗಳಲ್ಲಿ ಇಳಿಜಾರುಗಳಿದ್ದು, ಹಲವೆಡೆ ಒಂದು ಕಡೆ ಮಾತ್ರ ನಿರ್ಮಾಣ ಮಾಡಲಾಗಿದೆ ಎಂದರು.

ನಗರದ ಕೆಲ ಪ್ರಮುಖ ವತ್ತಗಳಲ್ಲಿ ತಂಗುದಾಣ ಪ್ರಯಾಣಿಕರಿಗೆ ಅಪಾಯಕಾರಿ ಯಾಗಿದ್ದು, ನಿಯಮಬಾಹಿರ ನಿರ್ಮಾಣವಾಗಿದೆ ಎಂದು ದೂರಿದರು.
ಬಸ್‌ಗಳ ಓಡಾಟವೇ ಇಲ್ಲದ ಕೆಲವು ರಸ್ತೆಗಳಲ್ಲಿ ಬಸ್ ಪ್ರಯಾಣಿಕರ ತಂಗುದಾಣ ನಿರ್ಮಿಸಿದ್ದು, ಅನೈತಿಕ ಚಟುವಟಿಕೆಗಳ ತಾಣವಾಗಿವೆ. ಕುಡುಕರ, ಕ್ರಿಮಿನಲ್‌ಗಳ, ಅಂದರ್ -ಬಾಹರ್ ಆಡುವವರ ಕಾರ್ಯ ಕ್ಷೇತ್ರವೂ ಆಗಿದ್ದು, ಕುವೆಂಪುನಗರ ರಸ್ತೆ ಪ್ರಾರಂಭದಲ್ಲಿ ಹಾಗೂ ವಿದ್ಯಾಭ್ಯಾರತಿ ಕಾಲೇಜ್ ಹತ್ತಿರ ನಿರ್ಮಿಸಿರುವ ತಂಗುದಾಣ ಉಷಾ ನರ್ಸಿಂಗ್ ಹೋಂನಿಂದ ರೋಟರಿ ಬ್ಲಡ್ ಬ್ಯಾಂಕ್ ಕಡೆಗೆ ಹೋಗುವಲ್ಲಿ ನಿರ್ಮಿಸಿರುವ ತಂಗುದಾಣ ಇವೆಲ್ಲವೂ ಅವೈಜ್ಞಾನಿಕವಾಗಿದ್ದು, ಪೊಲೀಸರಿಗೆ ಹೆಚ್ಚಿನ ಜವಾಬ್ದಾರಿ ಒದಗಿ ಬಂದಿದೆ. ಈ ಎಲ್ಲಾ ವಿಷಯವನ್ನು ಕೂಡಲೇ ಜಿಲ್ಲಾಡಳಿತದ ಗಮನಕ್ಕೆ ತಂದು ಸ್ಮಾರ್ಟ್ ಸಿಟಿ ನಿರ್ಮಾಣದ ಈ ಎಲ್ಲಾ ತಂಗುದಾಣ ಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಸಲು ಕ್ರಮಕ್ಕೆ ಒಕ್ಕೂಟ ಆಗ್ರಹಿಸಿದೆ.

ಪ್ರತಿಭಟನೆಯಲ್ಲಿ ಒಕ್ಕೂಟದ ಪ್ರಮುಖರಾದ ಕೆ.ವಿ. ವಸಂತಕುಮಾರ್, ಅಶೋಕ್ ಕುಮಾರ್, ಸತೀಶ್ ಕುಮಾರ್‌ಶೆಟ್ಟಿ, ಸುಬ್ಬಣ್ಣ, ಸೀತಾರಾಂ, ಚನ್ನವೀರಪ್ಪ ಗಾಮನಗಟ್ಟಿ, ಜನಮೇಜಿ ರಾವ್, ವೆಂಕಟನಾರಾಯಣ್ ಮೊದಲಾದವರಿದ್ದರು.

Spread the love

Soori

ಶಿವಮೊಗ್ಗ ಜಿಲ್ಲಾ ಸುದ್ದಿಗಳನ್ನ ಪ್ರಪಂಚಕ್ಕೆ ತಿಳಿಸುವ ಪ್ರಯತ್ನ ಸುದ್ದಿಲೈವ್ ನದು. ಪತ್ರಿಕೆ ಮತ್ತು ಟಿವಿ ಮಾಧ್ಯಮಗಳಿಗಿಂತ ವಿಭಿನ್ನ ಪ್ರಯತ್ನದಲ್ಲಿ ಪರ್ಯಾಯ ಮಾಧ್ಯಮವಾಗಿ ಪ್ರಕಟಿಸುವ ಸಣ್ಣಪ್ರಯತ್ನವೂ ಹೌದು! ದಯಮಾಡಿ ಹರಸಿ,ಬೆಂಬಲಿಸಿ

Related Articles

Leave a Reply

Your email address will not be published.

Back to top button