ರಾಜಕೀಯ

ಎನ್.ಎಚ್.ಶ್ರೀಪಾದ ರಾವ್ ಮತ್ತೆ ಶಿಮುಲ್ ಅಧ್ಯಕ್ಷರಾಗಿ ಅಧಿಕಾರ ಸ್ವೀಕಾರ

ಸುದ್ದಿಲೈವ್. ಕಾಂ/ಶಿವಮೊಗ್ಗ

ಶಿಮುಲ್ಅಧ್ಯಕ್ಷ ಸ್ಥಾನಕ್ಕೆ ಜ.1ರಂದು ನಡೆದಿದ್ದ ಚುನಾವಣೆ ರದ್ದುಗೊಳಿಸಿದ್ದ ಹೈಕೋರ್ಟ್ ಏಕ ಸದಸ್ಯ ಪೀಠದ ಆದೇಶವನ್ನು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಅವರನ್ನೊಳಗೊಂಡ ದ್ವಿಸದಸ್ಯ ಪೀಠ ರದ್ದುಗೊಳಿಸಿದೆ.

ಇದರೊಂದಿಗೆ ಮೂರು ತಿಂಗಳ ಬಳಿಕ ಎನ್.ಎಚ್.ಶ್ರೀಪಾದ ರಾವ್ ಮತ್ತೆ ಶಿಮುಲ್ ಅಧ್ಯಕ್ಷರಾಗಿದ್ದಾರೆ.
ತಕರಾರು ಅರ್ಜಿಯೊಂದರ ವಿಚಾರಣೆ ನಡೆಸಿದ್ದ ಹೈಕೋರ್ಟ್ ನ್ಯಾಯಮೂರ್ತಿ ಆರ್.ದೇವದಾಸ್ ಅವರಿದ್ದ ಪೀಠ, ಏಪ್ರಿಲ್ 29ರಂದು ಆದೇಶ ನೀಡಿ ಜ.1ರಂದು ನಡೆದಿದ್ದ ಚುನಾವಣೆಯನ್ನು ರದ್ದುಗೊಳಿಸಿ ಆದೇಶಿಸಿತ್ತು. ಇದರಿಂದ ಅಧ್ಯಕ್ಷ ಸ್ಥಾನ ಕಳೆದುಕೊಂಡ ಎನ್.ಎಚ್.ಶ್ರೀಪಾದ ರಾವ್ ಕೋರ್ಟ್ ಮೊರೆ ಹೋಗಿದ್ದರು.

ಏಪ್ರಿಲ್ 29ರ ಕೋರ್ಟ್ ಆದೇಶದಿಂದ ಮತ್ತೆ ನಿರ್ದೇಶಕ ಸ್ಥಾನಕ್ಕೆ ಮರಳಿದ್ದ ಎಚ್.ಕೆ.ಬಸಪ್ಪ ಶಿಮುಲ್ ಪ್ರಭಾರ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿದ್ದರು. ಇದೀಗ ದ್ವಿಸದಸ್ಯ ಪೀಠದ ಆದೇಶದಿಂದ ಎಚ್.ಕೆ.ಬಸಪ್ಪ ಹಾಗೂ ಟಿ.ಶಿವಶಂಕರಪ್ಪ ಮತ್ತೆ ನಿರ್ದೇಶಕ ಸ್ಥಾನವನ್ನು ಕಳೆದುಕೊಂಡಿದ್ದಾರೆ.

ಎನ್.ಎಚ್.ಶ್ರೀಪಾದ ರಾವ್ ಸೋಮವಾರ ಸಂಜೆ ಶಿಮುಲ್ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಇದರೊಂದಿಗೆ ಶಿಮುಲ್‌ನಲ್ಲಿ ಮತ್ತೊಂದು ಸುತ್ತಿನ ಕಾನೂನು ಹೋರಾಟ ಅಂತ್ಯವಾಗಿದೆ.

ಶಿಮುಲ್ ಅಧ್ಯಕ್ಷರ ಆಯ್ಕೆಗೆ ಜ.1ರಂದು ನಡೆದಿದ್ದ ಚುನಾವಣೆ ಮುನ್ನಾ ದಿನ ಡಿ.31ರಂದು ಎಚ್.ಕೆ.ಬಸಪ್ಪ ಹಾಗೂ ಟಿ.ಶಿವಶಂಕರಪ್ಪ ಅವರನ್ನು ನಿರ್ದೇಶಕ ಸ್ಥಾನದಿಂದ ಅನರ್ಹಗೊಳಿಸಲಾಗಿತ್ತು. ಆ ಸಂದರ್ಭದಲ್ಲಿ ಎಚ್.ಕೆ.ಬಸಪ್ಪ ಶಿಮುಲ್ ಉಪಾಧ್ಯಕ್ಷರಾಗಿ, ಪ್ರಭಾರ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದರು. ಅನರ್ಹತೆ ಪ್ರಶ್ನಿಸಿ ಅವರಿಬ್ಬರೂ ಕೋರ್ಟ್‌ಗೆ ಮೊರೆ ಹೋಗಿದ್ದರು.

ಪ್ರಕರಣದ ವಿಚಾರಣೆ ನಡೆಸಿದ್ದ ಏಕ ಸದಸ್ಯ ಪೀಠ ಜ.1ರಂದು ನಡೆದಿದ್ದ ಚುನಾವಣೆಯನ್ನು ರದ್ದುಪಡಿಸಿ ಎಚ್.ಕೆ.ಬಸಪ್ಪ ಹಾಗೂ ಟಿ.ಶಿವಶಂಕರಪ್ಪ ಅವರ ನಿರ್ದೇಶಕ ಸ್ಥಾನವನ್ನು ಸಿಂಧು ಎಂದು ತಿಳಿಸಿತ್ತು. ಅಧ್ಯಕ್ಷ ಸ್ಥಾನದಿಂದ ಕೆಳಗಿಳಿದ ಎನ್.ಎಚ್.ಶ್ರೀಪಾದ ರಾವ್ ಹೈಕೋರ್ಟ್ ಮೊರೆ ಹೋಗಿದ್ದರು.

ಆರು ತಿಂಗಳಲ್ಲಿ ಶಿಮುಲ್ ಅಧ್ಯಕ್ಷ ಸ್ಥಾನಕ್ಕೆ ಹೊಸದಾಗಿ ಚುನಾವಣೆ ನಡೆಸಬೇಕೆಂಬ ಏಕ ಸದಸ್ಯ ಪೀಠದ ತೀರ್ಪು ಈಗ ಅನ್ವಯವಾಗುವುದಿಲ್ಲ. ಆಡಳಿತ ಮಂಡಳಿ ಬೆಂಬಲ ಇರುವವರೆಗೆ ಎನ್.ಎಚ್.ಶ್ರೀಪಾದ ರಾವ್ ಅಧ್ಯಕ್ಷರಾಗಿ ಮುಂದುವರಿಯುತ್ತಾರೆ.

ಶಿಮುಲ್ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಸಿದ್ದ ಚುನಾವಣಾಧಿಕಾರಿ ಅಂದಿನ ಶಿವಮೊಗ್ಗ ಉಪವಿಭಾಗಾಧಿಕಾರಿಗೆ 10 ಸಾವಿರ ರೂ. ದಂಡ, ಶಿಮುಲ್ ನಿರ್ದೇಶಕರಾಗಿದ್ದ ಎಚ್.ಕೆ.ಬಸಪ್ಪ ಅವರನ್ನು ಸ್ಥಳೀಯ ಹಾಲು ಉತ್ಪಾದಕರ ಸಂಘದಿಂದ ವಜಾಗೊಳಿಸಿದ ದಾವಣಗೆರೆ ಸಹಕಾರ ಸಂಘಗಳ ಹೆಚ್ಚುವರಿ ರಿಜಿಸ್ಟ್ರಾರ್‌ಗೆ 10 ಸಾವಿರ ರೂ., ಮತ್ತೋರ್ವ ನಿರ್ದೇಶಕ ಟಿ.ಶಿವಶಂಕರಪ್ಪ ಅವರನ್ನು ವಜಾಗೊಳಿಸಿದ ಸಾಗರ ತಾಲೂಕು ಸಹಕಾರ ಸಂಘಗಳ ಹೆಚ್ಚುವರಿ ರಿಜಿಸ್ಟ್ರಾರ್‌ಗೆ 5 ಸಾವಿರ ರೂ. ದಂಡ ವಿಧಿಸಿದ್ದ ಏಕ ಸದಸ್ಯ ಪೀಠದ ಆದೇಶವೂ ಈಗ ರದ್ದುಗೊಂಡಂತಾಗಿದೆ.

Spread the love

Soori

ಶಿವಮೊಗ್ಗ ಜಿಲ್ಲಾ ಸುದ್ದಿಗಳನ್ನ ಪ್ರಪಂಚಕ್ಕೆ ತಿಳಿಸುವ ಪ್ರಯತ್ನ ಸುದ್ದಿಲೈವ್ ನದು. ಪತ್ರಿಕೆ ಮತ್ತು ಟಿವಿ ಮಾಧ್ಯಮಗಳಿಗಿಂತ ವಿಭಿನ್ನ ಪ್ರಯತ್ನದಲ್ಲಿ ಪರ್ಯಾಯ ಮಾಧ್ಯಮವಾಗಿ ಪ್ರಕಟಿಸುವ ಸಣ್ಣಪ್ರಯತ್ನವೂ ಹೌದು! ದಯಮಾಡಿ ಹರಸಿ,ಬೆಂಬಲಿಸಿ

Related Articles

Leave a Reply

Your email address will not be published.

Back to top button