ಶಿಕ್ಷಣ

ಇವನಿಂಗ್ ಕಾಲೇಜು ಉಳಿಸಿ ಹೋರಾಟಕ್ಕೆ ನೀವು ಕೈಜೋಡಿಸಿ!

ಸುದ್ದಿಲೈವ್. ಕಾಂ/ಶಿವಮೊಗ್ಗ

ಕಾಲೇಜು ಲೈಫ್​ ಗೋಲ್ಡನ್​ ಲೈಫ್​ ಅನ್ನೋದು ನಿಜವೋ ಸುಳ್ಳೋ ಅವರವರ ಭಾವಕ್ಕೆ ಬಿಟ್ಟಿದ್ದು. ಆದರೆ, ಶಿವಮೊಗ್ಗದ ಗಾಂಧಿಪಾರ್ಕ್​ ಎದುರುಗಡೆ ಇರುವ ಡಿವಿಎಸ್​ ಸಂಜೆ ಕಾಲೇಜಿನಲ್ಲಿ ಓದಿದವರನ್ನು ಕೇಳಿದ್ರೆ ಮಾತ್ರ ಕಾಲೇಜ್​ ಲೈಫ್​ ಅಂದರೆ ಟ್ಯೂಬ್​ಲೈಟ್ ಲೈಫ್​ ಗುರು ಅಂತಾರೆ. ಕಾರಣ ಇಷ್ಟೆ! ಎಲ್ಲರೂ ನೀಟ್​ ನೀಟಾಗಿ, ಎಲ್ಲರನ್ನೂ ಮೀಟ್ ಮಾಡುತ್ತಾ, ಕಾಲೇಜ್​ ಕುಮಾರ, ಕುಮಾರಿಯರಾಗಿ ಎಂಜಾಯ್​ ಮಾಡ್ತಾರೆ. ಆದರೆ ಈ ಲೈಫ್​ ಸ್ಟೈಲ್​ ಇವನಿಂಗ್ ಕಾಲೇಜಿನಲ್ಲಿ ಖಂಡಿತಾ ಸಿಗೊಲ್ಲ. ಬೆಳಗ್ಗೆಯಿಂದ ಕೆಲಸ ಮಾಡಿ ಸುಸ್ತಾಗಿ ಬರುವ ವಿದ್ಯಾರ್ಥಿಗಳು, ಲಚ್ಚರ್​ಗಳ ಪಾಠ ಕೇಳುವಾಗ, ಅವರ ಮನಸ್ಸು ಕೂಡ ಕ್ಲಾಸ್​ನ ಟ್ಯೂಬ್​ ಲೈಟ್​ ಮಿಣಕ..ಮಿಣಕ ಅಂತಿರುತ್ತೆ.

ಆದರೆ ಬದುಕಿನ ಅಡಿಪಾಯ ಖುದ್ದಾಗಿ ಹಾಕಿಕೊಳ್ಳಬೇಕಾದ ಅನಿವಾರ್ಯತೆ! ಜೊತೆಯಲ್ಲಿ ಜೀವನ ಸಾಧಿಸೋದಕ್ಕೆ ಶಿಕ್ಷಣದ ಬೇಸ್ಮೆಂಟ್​ ನಿರ್ಮಿಸಿಕೊಳ್ಳಬೇಕಾದ ಅವಶ್ಯಕತೆ! ಎರಡೂ ಕಾರಣಕ್ಕೆ ಅದೆಷ್ಟೋ ವಿದ್ಯಾರ್ಥಿ, ವಿದ್ಯಾರ್ಥಿಗಳು ಕಳೆದ 54 ವರ್ಷಗಳಲ್ಲಿ, ಸಂಜೆ ಕಾಲೇಜಿನ ಟ್ಯೂಬ್​ಲೈಟ್​ಗಳ ಕೆಳಗೆ ಪಾಠ ಕಲಿತು, ಇವತ್ತು ಸಮಾಜದ ಬಹುಮುಖ್ಯ ಅಂಗಗಳಾಗಿ ತಮ್ಮ ಕೊಡುಗೆಗಳನ್ನು ನೀಡುತ್ತಿದ್ದಾರೆ.

ಈ ಮಾತನ್ನು ತಮಾಷೆಗೆ ಹೇಳುತ್ತಿಲ್ಲ. ಸಂಜೆ ಕಾಲೇಜಿನಲ್ಲಿ ಓದಿದವರ ಪೈಕಿ ಹಲವರು ಸರ್ಕಾರದ ವಿವಿಧ ಇಲಾಖೆಗಳಲ್ಲಿ ದೊಡ್ಡ ದೊಡ್ಡ ಸ್ಥಾನಗಳನ್ನು ಅಲಂಕರಿಸಿದ್ದಾರೆ. ನ್ಯಾಯಾಂಗ ವ್ಯವಸ್ಥೆಯಲ್ಲಿ ಜಡ್ಜ್​ , ವಕೀಲ, ಸಿಬ್ಬಂದಿ ಸ್ಥಾನವನ್ನ ಅಲಂಕರಿಸಿದ್ದಾರೆ. ತಮ್ಮೂರಿನ ಜನಪ್ರತಿನಿಧಿಗಳಾಗಿದ್ದಾರೆ, ರಾಜಕೀಯ ವ್ಯವಸ್ಥೆಯಲ್ಲಿ ಮುಖಂಡರಾಗಿದ್ದಾರೆ. ಎಲ್ಲಕ್ಕಿಂತ ಹೆಚ್ಚಾಗಿ, ಮಾಲೀಕ ಕೊಡುತ್ತಿದ್ದ ಕೂಲಿಯಲ್ಲಿ ಫೀಜ್ ಕಟ್ಟಿ ಓದಿದವರು, ಇವತ್ತು ಲಕ್ಷ ಲಕ್ಷ ಸಂಪಾದಿಸುತ್ತಿದ್ದಾರೆ. ಎಲ್ಲೋ ಕೆಲಸಕ್ಕಿದ್ದವರು, ಸ್ವಂತ ಜಮೀನಿನಲ್ಲಿ ಹತ್ತಾರು ಜನಕ್ಕೆ ಕೆಲಸ ಕೊಟ್ಟಿದ್ದಾರೆ. ವರ್ಷ ವರ್ಷ ಹೊರಬೀಳುವ ರಿಸಲ್ಟ್​ ರೇಟ್​ ಸಂಜೆ ಕಾಲೇಜಿನಲ್ಲಿ ಸೂಪರ್ ಆಗಿಯೇ ಇದೆ. ಆದರೆ ಅದಕ್ಕಿಂತ ಉತ್ತಮವಾಗಿರೋದು, ಇಲ್ಲಿಂದ ಔಟ್​ಪುಟ್​ ಆಗಿ ಹೊರಬಿದ್ದ ವಿದ್ಯಾರ್ಥಿಗಳ ಸಾಧನೆಯ ರೇಟಿಂಗ್​. ಈ ಕಾಲೇಜಿನ 99.9 ಪರ್ಸೆಂಟ್​ ಸ್ಟೂಡೆಂಟ್​ಗಳು ಸಾಧಕರಾಗಿದ್ದಾರೆ. ತಮ್ಮ ಜೀವನ ಸಾಧನೆಯ ಕುಸೂರಿ ಕೆಲಸದಲ್ಲಿ ಪರಿಪೂರ್ಣತೆ ಸಾಧಿಸಿದ್ದಾರೆ. ಸಮಾಜದ ಮುಖ್ಯ ಅಂಗವಾಗುವುದಕ್ಕೆ ಸಂಜೆ ಕಾಲೇಜು ವೇದಿಕೆಯನ್ನಷ್ಟೆ ಒದಗಿಸಲಿಲ್ಲ. ಬದುಕಿನ ಭಗವದ್ಗೀತೆಯನ್ನೆ ಒದಗಿಸಿದೆ.

ಇಂತಹ ಕಾಲೇಜನ್ನು ಮುಚ್ಚುವ ಹವಣಿಕೆ ಮೊದಲಿನಿಂದಲೂ ನಡೆಯುತ್ತಲೇ ಬಂದಿದೆ. ಊರಿಗೊಬ್ಬಳೇ ಪದ್ಮಾವತಿ ಎನ್ನುವ ಹಾಗೆ ಆರ್ಟ್ಸ್​ ವಿಷಯದ ಎಕೈಕ ಸಂಜೆ ಕಾಲೇಜು ಡಿವಿಎಸ್​ ಸಂಸ್ಥೆಯದ್ದು. ಆದರೆ ಇದರಿಂದ ಯಾರಿಗೆ ಏನು ಸಮಸ್ಯೆಯೋ ಏನೋ!? ಕಾಲೇಜನ್ನು ಮುಚ್ಚುವ ಹುನ್ನಾರ ನಡೆಯುತ್ತಲೇ ಬಂದಿದೆ. ಇದಕ್ಕೆ ಪೂರಕವಾಗಿ ಒಂದುವರೆ ದಶಕದ ಹಿಂದೆ ನಡೆಯುತ್ತಿದ್ದ ಪಿಯುಸಿ ಸಂಜೆ ತರಗತಿಗಳನ್ನ ಮುಚ್ಚಲಾಯ್ತು. ಪರಿಣಾಮ ಡಿಗ್ರಿ ಪ್ರವೇಶದ ಸಂಖ್ಯೆ ಕಡಿಮೆಯಾಗುತ್ತಾ ಹೋಯಿತು. ಇದು ಸಾಲದೆಂಬಂತೆ ಮಲತಾಯಿ ದೋರಣೆಯಿಂದಾಗಿ ಕಾಲೇಜಿನ ಪ್ರಗತಿಗೆ ಸಮರ್ಪಕ ನೆರವು ಸಿಗದ ಸನ್ನಿವೇಶ ಸೃಷ್ಟಿಸಿದೆ. ಶಿವಮೊಗ್ಗದ ಶ್ರಮಿಕ ವರ್ಗದ ಆಶಾಕಿರಣದಂತಿರುವ ಕಾಲೇಜಿನ ಬಗ್ಗೆ ಒಂದಿಷ್ಟು ಪ್ರಚಾರ ಸಿಗದೇ ಹೋದಾಗ ಸಹಜವಾಗಿಯೇ ಅದು ಸಂಸ್ಥೆಯ ಮೇಲೆ ಪರಿಣಾಮ ಬೀರಿದೆ. ಕಾಲಕ್ಕೆ ತಕ್ಕಂತೆ ಬದಲಾಗದೇ ಹೋಗಿದ್ದು ಕೂಡ ಕಾಲೇಜನ್ನ ಸಂಧ್ಯಾ ಕಾಲಕ್ಕೆ ದೂಡಿದೆ ಎನ್ನಬಹುದು.

ಅತಿ ಕಡಿಮೆ ಶುಲ್ಕದಲ್ಲಿ, ತಮ್ಮ ಬಿಡುವಿನ ಸಂಜೆಯ ಹೊತ್ತಿನಲ್ಲಿ, ಸ್ಪರ್ಧಾತ್ಮಕ ಪರೀಕ್ಷೆಗಳಿಗೂ ಸಿದ್ಧವಾಗ್ತಾ, ಜೀವನ ಡಿಗ್ರಿ ಸಂಪಾದಿಸುವ ಅವಕಾಶ ಇರುವುದು ಸಂಜೆ ಕಾಲೇಜಿನಲ್ಲಿ ಮಾತ್ರ! ತಮ್ಮ ಮಕ್ಕಳಿಗೆ ಮನೆ ಪಾಠ ಹೇಳಿದ ಹಾಗೆ ಕಲಿಸುವ ಲಚ್ಚರ್​ಗಳು ಇವತ್ತಿಗೂ ಕಾಲೇಜಿನಲ್ಲಿದ್ದಾರೆ. ಶಿಕ್ಷಣದ ಜೊತೆ ಜೊತೆಗೆ ಕಷ್ಟಸುಖವನ್ನು ವಿಚಾರಿಸುರ ಬೋದಕೇತರ ಸಿಬ್ಬಂದಿಗಳು ಇವತ್ತಿಗೂ ಎನಣ್ಣ ಆರಾಮಾ ಎನ್ನುತ್ತಲೇ ಎದುರಾಗುತ್ತಾರೆ. ಬುಕ್​, ನೋಟ್ಸ್​, ಪರೀಕ್ಷೆ ರಿಸಲ್ಟ್​ ಇದನ್ನ ದೂರಶಿಕ್ಷಣದಲ್ಲಿಯು ಅರಗಿಸಿಕೊಳ್ಳಬಹುದು. ಆದರೆ ಸಮುದಾಯದ ಜೊತೆಗೆ ಬೆರೆತು ಜೀವನ ಪಾಠದ ಜೊತೆಗೆ ಪದವಿ ಪಡೆಯುವುದು ಸಂಜೆ ಕಾಲೇಜಿನಲ್ಲಷ್ಟೆ ಸಾಧ್ಯ . ಇಂತಹ ಕಾಲೇಜಿನ ಭವಿಷ್ಯವನ್ನು ಹೊಸದಾಗಿ ಬರೆಯಬೇಕಾಗಿದೆ. ಭವಿಷ್ಯದ ಸಾಧಕರಿಗಾಗಿ ಈ ಕಾಲೇಜನ್ನು ಮುಂದೆಯು ಸಹ ಉಳಿಸಿಕೊಳ್ಳಬೇಕಿದೆ. ಇದರ ಹೊರೆಯನ್ನು ಹಳೆಯ ವಿದ್ಯಾರ್ಥಿಗಳೇ ಹೊರಬೇಕಾಗಿದೆ.

ಸಂಜೆ ಕಾಲೇಜು ಉಳಿಸಿ ಹೋರಾಟ 2002 -03 ಸಾಲಿನಿಂದಲೇ ಆರಂಭವಾಗಿತ್ತು. ಇನ್ನೇನು ಮುಚ್ಚೆ ಬಿಟ್ಟೀತು ಎನ್ನುವಾಗ, ಶಿವಮೊಗ್ಗದ ಪ್ರತಿ ವಿದ್ಯಾರ್ಥಿ ಸಂಘಟನೆಗಳು ತಮ್ಮಲ್ಲಿನ ಎಲ್ಲಾ ಬಿನ್ನಾಭಿಪ್ರಾಯವನ್ನು ಮರೆತು, ಜಿಲ್ಲಾಧಿಕಾರಿಯ ಎದುರು ಕುಳಿತು, ಕಾಲೇಜು ನಮ್ಮದು, ನಮಗೆ ಆ ಕಾಲೇಜು ಉಳಿಯಲೇಬೇಕು ಎಂದು ಪಟ್ಟು ಹಿಡಿದಿದ್ದವು. ಕಾಲೇಜಿನ ಮೌಲ್ಯ ಹಾಗೂ ವಿದ್ಯಾರ್ಥಿಗಳ ಒಗ್ಗಟ್ಟಿನ ಹೋರಾಟ ಕಂಡಿದ್ದ ಅಂದಿನ ಡಿಸಿ ಅನಿಲ್​ಕುಮಾರ್​ರವರು ಸ್ವತಃ ಕಾಲೇಜಿಗೆ ಬಂದು, ಸಂಸ್ಥೆಯ ಉಳಿವಿಗೆ ಅಗತ್ಯವಿದ್ದ ಕ್ರಮಕ್ಕೆ ಮುಂದಾಗಿದ್ದರು. ಅಗತ್ಯವಿದ್ದವರ ಬಳಿ ಮಾತನಾಡಿ, ಕಾಲೇಜು ಮುಚ್ಚದಿರಿ ಎಂದು ಒಪ್ಪಿಸಿದ್ದರು. ಅವತ್ತಿನ ಹೋರಾಟದ ಫಲವಾಗಿ ಕಾಲೇಜು ನ್ಯಾಕ್​ನಿಂದಲೂ ಮತ್ತೆ ಉತ್ತಮ ಅಂಕವನ್ನು ಪಡೆಯಿತು. ಕಡಗಣಿಸಿದ್ದ ಕಾಲೇಜಿನಲ್ಲಿ ಉತ್ತಮ ಸೌಲಭ್ಯಗಳು ಲಭ್ಯವಾದವು. ಆದರೆ ನಂತರ ಪಿಯುಸಿ ತರಗತಿಗಳನ್ನ ಮುಚ್ಚಿದ್ದು ಕಾಲೇಜಿನ ಮಟ್ಟಿಗೆ ದೊಡ್ಡ ಪೆಟ್ಟಾಗಿತ್ತು.

ಸದ್ಯ ಸಂಜೆ ಕಾಲೇಜ್​ನ್ನ ಮತ್ತೆ ಉಳಿಸಿಕೊಳ್ಳುವ ಅನಿವಾರ್ಯತೆ ಇದೆ. ಈ ನಿಟ್ಟಿನಲ್ಲಿ ಹಲವು ಕೆಲಸಗಳು ಆಗಬೇಕಿದೆ. ಅದಕ್ಕೊಂದು ದೊಡ್ಡ ಶಕ್ತಿ ಬೇಕಿದೆ. ಆ ಶಕ್ತಿ ಕಾಲೇಜಿನ ಹಳೆಯ ವಿದ್ಯಾರ್ಥಿಗಳು. ಬದುಕನ್ನೆ ದಾರೆ ಎರೆದ ಕಾಲೇಜಿಗಾಗಿ, ಸಣ್ಣದೊಂದು ಒಗ್ಗಟ್ಟಿನ ಧ್ವನಿಯಾಗುವುದು ಹಳೆಯ ವಿದ್ಯಾರ್ಥಿಗಳಿಗೆ ದೊಡ್ಡ ವಿಷಯವೇ ಅಲ್ಲ. ಈ ನಿಟ್ಟಿನಲ್ಲಿ ಹಳೆಯ ವಿದ್ಯಾರ್ಥಿಗಳೆಲ್ಲಾ ಒಂದಾಗಿ ಕೂತು ಮಾತನಾಡುವುದಕ್ಕೆ, ಜೀವನ ಸ್ಫೂರ್ತಿ ತುಂಬಿದ ಶಕ್ತಿಕೇಂದ್ರದಲ್ಲಿಯೇ ದಿನಾಂಕ ಹಾಗೂ ಸಮಯ ನಿಗದಿ ಮಾಡಲಾಗಿದೆ. ಮುಂದಿನ ಶನಿವಾರ ಸಂಜೆ ಏಳು ಗಂಟೆಗೆ ಸಂಜೆ ಕಾಲೇಜಿನ ಹಳೆಯ ವಿದ್ಯಾರ್ಥಿಗಳೆಲ್ಲಾ ಒಟ್ಟಾಗಿ ಸೇರಿ ಒಂದಿಷ್ಟು ನಿರ್ಣಯಗಳನ್ನ ಕೈಗೊಳ್ಳಬೇಕಿದೆ. ಸದ್ಯ ಮತ್ತೊಮ್ಮೆ ನ್ಯಾಕ್​ ಕಮಿಟಿಯು ಪರಿಶೀಲನೆಗಾಗಿ ಕಾಲೇಜಿಗೆ ಇದೇ ಜುಲೈ ತಿಂಗಳಿನಲ್ಲಿ ಬರುತ್ತಿದ್ದು, ಹಳೆಯ ವಿದ್ಯಾರ್ಥಿಗಳ ಪರವಾಗಿ ಕಾಲೇಜಿಗೆ ಸಿಗುವ ಅಂಕಗಳನ್ನ ಒದಗಿಸಿ ಕೊಡುವ ಜವಾಬ್ದಾರಿಯನ್ನ ನಿರ್ವಹಿಸಬೇಕಿದೆ.

ಐದು ದಶಕದ ಹಳೆಯ ವಿದ್ಯಾರ್ಥಿಗಳನ್ನ ಸಂಪರ್ಕಿಸುವುದು ಸುಲಭದ ಮಾತಲ್ಲ. ಫೋನೇ ಇಲ್ಲದ ಕಾಲದಿಂದ ಹಿಡಿದು, ಎಸ್​ಟಿಡಿ, ಕಾಯಿನ್​ಬಾಕ್ಸ್​, ಮೊಬೈಲ್​ ಜಮಾನಾದವರೆಗೂ ಲಿಂಕ್​ ಆಗಿರುವ ಹಳೇಯ ವಿದ್ಯಾರ್ಥಿಗಳನ್ನು ಆದಷ್ಟು ಸಂಪರ್ಕಿಸುವ ಪ್ರಯತ್ನ ನಡೆಯುತ್ತಿದೆ. ಇದರ ಹೊರತಾಗಿ ಈ ಸುದ್ದಿಯನ್ನು ಓದುವ ಕಾಲೇಜಿನ ಹಳೆಯ ವಿದ್ಯಾರ್ಥಿ ಶನಿವಾರದ ಸಭೆಗೆ ಬಂದೆ ಬರುತ್ತಾರೆ ಎನ್ನುವ ನಂಬಿಕೆಯಿದೆ. ಭಾಗ್ಯದ ಲಕ್ಷ್ಮೀ ಭಾರಮ್ಮ ಸಂಜೆಯ ವಿದ್ಯಾಲಯಕೆ ಎಂದು ಹಾಡಿದ ಕಾಲೇಜು ದಿನಗಳ ನೆನಪಿನ ಬುತ್ತಿಯೊಂದಿಗೆ ಕಾಲೇಜಿಗೆ ಮತ್ತೆ ಹೊಸ ಭಾಗ್ಯವನ್ನು ಒದಗಿಸುವುದಕ್ಕಾಗಿ ಹಳೇಯ ವಿದ್ಯಾರ್ಥಿಗಳೆಲ್ಲಾ ಒಂದು ಗೂಡಬೇಕಿದೆ. ಹಳೆಯ ಗೆಳಯ ಗೆಳತಿಯರ ಜೊತೆಗೆ ಎಂದೋ ಮುಗಿಯದ ಮಾತಿನ್ನೂ ಆಡುವ ಅವಕಾಶವಿದೆ. ಬನ್ನಿ ಮೀಟ್ ಮಾಡೋಣ!..

ಶನಿವಾರ ಸಂಜೆ ಕಾಲೇಜು ಹಳೇ ವಿದ್ಯಾರ್ಥಿಗಳ ಸಭೆ

ಶಿವಮೊಗ್ಗದ ಡಿವಿಎಸ್ ಸಂಜೆ ಕಾಲೇಜು ವಿದ್ಯಾರ್ಥಿಗಳ ಸಂಘ ರಚನೆಗೆ ನಿರ್ಧರಿಸಲಾಗಿದೆ. ಈ ಬಗ್ಗೆ ಮಹತ್ವದ ಸಭೆ ಇದೇ 11ರ ಶನಿವಾರ ಸಂಜೆ 7ಗಂಟೆಗೆ ವಿಶೇಷ ಸಭೆ ಕರೆಯಲಾಗಿದೆ. ಸಂಜೆ ಕಾಲೇಜಿನ ವಿದ್ಯಾರ್ಥಿಗಳು ಈ ಸಭೆಯಲ್ಲಿ ಪಾಲ್ಗೊಂಡು ತಮ್ಮ ಸಲಹೆ- ಸಹಕಾರ ನೀಡಲು ವಿನಂತಿ.
ಮಾಹಿತಿಗೆ ಸಂಪರ್ಕಿಸಿ: 9448138183
9353314090

ಹಳೇಯ ವಿದ್ಯಾರ್ಥಿಗಳ ತಾತ್ಕಾಲಿಕ ಸಮಿತಿ

Spread the love

Soori

ಶಿವಮೊಗ್ಗ ಜಿಲ್ಲಾ ಸುದ್ದಿಗಳನ್ನ ಪ್ರಪಂಚಕ್ಕೆ ತಿಳಿಸುವ ಪ್ರಯತ್ನ ಸುದ್ದಿಲೈವ್ ನದು. ಪತ್ರಿಕೆ ಮತ್ತು ಟಿವಿ ಮಾಧ್ಯಮಗಳಿಗಿಂತ ವಿಭಿನ್ನ ಪ್ರಯತ್ನದಲ್ಲಿ ಪರ್ಯಾಯ ಮಾಧ್ಯಮವಾಗಿ ಪ್ರಕಟಿಸುವ ಸಣ್ಣಪ್ರಯತ್ನವೂ ಹೌದು! ದಯಮಾಡಿ ಹರಿಸಿ,ಬೆಂಬಲಿಸಿ

Related Articles

Leave a Reply

Your email address will not be published.

Back to top button