ಮನೋರಂಜನೆ

ವಿಶ್ವ ಪರಿಸರ ದಿನಾಚರಣೆಯ ದಿನದಂದೇ ಚಂಪಕ ಸರಸ್ಸು ಕಲ್ಯಾಣಿ ಲೋಕಾರ್ಪಣೆ

ಸುದ್ದಿಲೈವ್.ಕಾಂ/ಶಿವಮೊಗ್ಗ

ಸಾವಿರಾರು ಕೆರೆಗಳ ಪುನಶ್ಚೇತನ, ದಣಿವರಿಯದ ಕಾರ್ಯ, ಬೀದರ್ ಟು ಚಾಮರಾಜ ನಗರ, ಕೆರೆಗಳೇ ಹಳ್ಳಿಗಳ ಜೀವನಾಡಿ ಇವು ಯಶೋ ಮಾರ್ಗದ ಧ್ಯೇಯ ಮತ್ತು ಗುರಿಗನ್ನ ಮಾಡಿಕೊಂಡು ಹೊರಟ ಯಶೋ ಮಾರ್ಗ ಇವುಗಳ ಅಭಿವೃದ್ಧಿಕಾರ್ಯಕ್ಕೆ ಟೊಂಕಕಟ್ಟಿ ನಿಂತಿದೆ. ಚಂಪಕ ಸರಸ್ಸು ಎಂಬ ಐತಿಹಾಸಿಕ ಪುಷ್ಕರಣಿಯನ್ನ 6 ತಿಂಗಳಲ್ಲಿ ಪುನಶ್ಚೇತನಗೊಳಿಸಿ ಇಂದು ವಿಶ್ವ ಪರಿಸರದ ದಿನಾಚರಣೆಯಂದು ಲೋಕಾರ್ಪಣೆ ಮಾಡಿದೆ.

ಈ ಕೆರೆಯ ಉಗಮ 1499 ರಿಂದ 1565ರ ಮಧ್ಯೆ ಕೆಳದಿ ಅರಸರ ಕಾಲದಲ್ಲಿ ನಿರ್ಮಾಣವಾಗಿದೆ ಎಂದು ಹೇಳಲಾಗುತ್ತಿದೆ. ಈ ಕೊಳ ಶಿವಮೊಗ್ಗದ ಸಾಗರ ತಾಲೂಕು ಆನಂದಪುರ ಹೋಬಳಿಯ ಮಲಂದೂರು ಗ್ರಾಮದಲ್ಲಿದೆ. 76.8 ಮೀಟರ್ ಅಗಲ ಮತ್ತು 77.8 ಮೀಟರ್ ಅಗಲವನ್ನ ಹೊಂದಿದ ಈ ಕಲ್ಯಾಣಿಯನ್ನ ಜಂಬಿಟ್ಟಿಗೆಯಿಂದ ನಿರ್ಮಿಸಲಾಗಿದೆ. ಆದರೆ ಪಾಳುಬಿದ್ದಂತಾಗಿರುವ ಕಲ್ಯಾಣಿ ಅನೇಕ ಅನೈತಿಕ ಚಟುವಟಿಕೆಗೆ ಕಾರಣವಾಗಿತ್ತು.

ಇವುಗಳ ಪುನಶ್ಚೇತನಗೊಳಿಸಿ ಇಂದು ಲೋಕಾರ್ಪಣೆಗೊಳಿಸಲಾಗಿದೆ. ಈ ವೇಳೆ ಯಶ್ ಅಭಿಮಾನಿಗಳ ಸಂಘದ ಅಧ್ಯಕ್ಷ, ಪದಾಧಿಕಾರಿಗಳು, ಇತಿಹಾಸ ತಜ್ಞ ಗುಂಡಾ ಜೋಯಿಸ್, ಖ್ಯಾತ ಪರಿಸರ ಹಾಗೂ ಜಲತಜ್ಞ ಶಿವಾನಂದ ಕಳವೆ ಉಪಸ್ಥಿತರಿದ್ದರು. ಚಂಪಕ ಸರಸು ಪುಷ್ಕರಣಿಯನ್ನ ಯಶ್ ಮಾರ್ಗದಡಿ ಆಯ್ಕೆ ಮಾಡಿಕೊಂಡಾಗಲೇ ಇಲ್ಲಿನ ಸುತ್ತಮುತ್ತಲಿನ ಜನ ಒಂದು ಅದ್ಬುತ ಮೆಚ್ಚುಗೆಯನ್ನ ವ್ಯಕ್ತಪಡಿಸಿದ್ದರು. ದೂರದ ಊರಿನಲ್ಲಿ ನೆಲೆಸಿದ್ದ ಇಲ್ಲಿನ ಜನ ಸಹ ಬಂದು ನೋಡಿಕೊಂಡು ಹೋಗಿದ್ದು ಇತಿಹಾಸ.

ಈಗ ಪುಷ್ಕರಣಿ ಪುನಶ್ಚೇತನಗೊಂಡಿದೆ. ಪುಷ್ಕರಣಿಯ ಹೆಸರು ಮತ್ತು ಯಶ್ ಮಾರ್ಗದಡಿ ಈ ಕೆರೆಯ ಹೆಸರು ಕೇಳಿ ಬಂತು ಎಂಬುದು ಸಹ ಕುತೂಹಲ ಹುಟ್ಟಿಸುವ ಸಂಗತಿಗಳೇ. ಚಂಪಕ ಸರಸ್ಸು ಎಂದರೆ ಸಂಪಿಗೆ ಮಧ್ಯೆ ಇರುವ ಕಲ್ಯಾಣಿ ಅಥವಾ ಪುಷ್ಕರಣಿ ಎಂದು ಅರ್ಥ.

ಕೆಲ ಇತಿಹಾಸ ತಜ್ಞರು ಕೆಳದಿ ಅರಸ ರಾಜ ವೆಂಕಟಪ್ಪ ನಾಯಕನಿಗೆ ಬೆಸ್ತರ ಯುವತಿ ಚಂಪಕಾಳ ಮೇಲೆ ಮೋಹವಿತ್ತು. ಆಕೆಯ ಸ್ನೇಹವನ್ನ ಸಹಿಸದ ರಾಣಿ ಹಾಗೂ ರಾಜ್ಯದ ಜನ ಚಂಪಕಾಳನ್ನ ಅವಮಾನಿಸುತ್ತಿದ್ದರು. ಈ ಕಾರಣದಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಳು. ಅವಳ ನೆನಪಿಗಾಗಿ ವೆಂಕಟಪ್ಪ ಪುಷ್ಕರಣಿಯನ್ನ ಕಟ್ಟಿಸಿದ್ದಾನೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಯಶೋಮಾರ್ಗದ ರೂವಾರಿ ಶಿವಾನಂದ ಕಳವೆ ನಟ ಯಶ್ ಗೆ ಈ ಕೊಳದ ಮಾಹಿತಿ ನೀಡಿ ಪುನಶ್ಚೇತನ ಮಾಡುವ ಸಂಕಲ್ಪ ಮಾಡಿದರು. ಈ ಕುರಿತು ಮಾತನಾಡಿದ ಶಿವಾನಂದ ಕಳವೆ, ಕೆರೆಗಳ ಹೂಳು ತೆಗೆಯಲು ತಿಳಿಸಿದ ಯಶ್ ನಮಗೆ ರಾಜ್ಯದ ಕೆರೆಗಳನ್ನ ನೋಡಿಕೊಂಡು ಬರಲು ತಿಳಿಸಿದ್ದರು.

ರಾಜ್ಯಾದ್ಯಂತ ತಿರುಗಾಡಿ 39 ಸಾವಿರ ಕೆರೆಗಳಲ್ಲಿ ಸಾವಿರಾರು ಕೆರೆಗಳನ್ನ ನೋಡಿಕೊಂಡು ಬಂದೆ. ಸಾಗರಕ್ಕೆ ಬಂದಾಗ ಚಂಪಕ ಸರಸ್ಸನ್ನ ನೋಡುವ ಭಾಗ್ಯ ದೊರೆಕಿತು. ಗಿಡಗಂಟಿಗಳಿಂದ ಕೂಡಿದ ಕೆರೆ ಮದ್ಯದ ಬಾಟಿಲುಗಳಿಂದಲೂ ತುಂಬಿ ಹೋಗಿತ್ತು. ಇದನ್ನ ನೋಡಿದ ನನಗೆ ಬೇಸರ ವೆನಿಸಿತು. ಯಶೋ ಮಾರ್ಗದ ಅಡಿ ಪುಷ್ಕರಣಿಯ ಅಭಿವೃದ್ಧಿ ಕಾರ್ಯಕ್ಕೆ ಕೈಗೆತ್ತಿಕೊಳ್ಳಲಾಯಿತು.

ನವೆಂಬರ್ ನಲ್ಲಿ ಇದರ ಪುನಶ್ಚೇತನ ಕಾರ್ಯ ಆರಂಭವಾಯಿತು. ಕಲ್ಯಾಣಿಯ ಕಲ್ಲುಗಳನ್ನೇ ಬಳಸಿ ಪುನಶ್ಚೇತನಗೊಳಿಸಲಾಯಿತು. ಒಂದೊಂದು ಕಲ್ಲು 80 ಕೆ.ಜಿ ತೂಕವಿದ್ದವು. ಸ್ಥಳೀಯವಾಗಿ 40 ಜನರನ್ನ ಸೇರಿಸಿ ಪುನಶ್ಚೇತನವನ್ನ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

Spread the love

Soori

ಶಿವಮೊಗ್ಗ ಜಿಲ್ಲಾ ಸುದ್ದಿಗಳನ್ನ ಪ್ರಪಂಚಕ್ಕೆ ತಿಳಿಸುವ ಪ್ರಯತ್ನ ಸುದ್ದಿಲೈವ್ ನದು. ಪತ್ರಿಕೆ ಮತ್ತು ಟಿವಿ ಮಾಧ್ಯಮಗಳಿಗಿಂತ ವಿಭಿನ್ನ ಪ್ರಯತ್ನದಲ್ಲಿ ಪರ್ಯಾಯ ಮಾಧ್ಯಮವಾಗಿ ಪ್ರಕಟಿಸುವ ಸಣ್ಣಪ್ರಯತ್ನವೂ ಹೌದು! ದಯಮಾಡಿ ಹರಿಸಿ,ಬೆಂಬಲಿಸಿ

Related Articles

Leave a Reply

Your email address will not be published.

Back to top button