ವಿಮಾ ಹಣವನ್ನ ಮೃತ ಕುಟುಂಬಕ್ಕೆ ನೀಡುವಂತೆ ಆದೇಶಿಸಿ ಆಯೋಗ ತೀರ್ಪು

ಸುದ್ದಿಲೈವ್.ಕಾಂ/ಶಿವಮೊಗ್ಗ
ಸಾವನ್ನಪ್ಪಿದ ವ್ಯಕ್ತಿ ಆರೋಪಿ ಎಂದು ಪರಿಗಣಿಸಿದ ವಿಮಾ ಕಂಪನಿ ವಿಮಾ ಹಣವನ್ನ ನೀಡುವಲ್ಲಿ ನಿರಾಕರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕೆಂದು ಆದೇಶಿಸಿ ತೂರ್ಪು ನೀಡಿದೆ.
ಎಲ್ ರಮ್ಯಾರವರು ದಿವಂಗತರಾದ ಪತಿಗೆ ವಿಮಾ ಹಣ ನೀಡಬೇಕೆಂದು ಅರ್ಜಿ ಸಲ್ಲಿಸಿದ್ದರು. ಆದರೆ ವಿಮಾಕಂಪನಿ ಹಣ ನೀಡಲು ನಿರಾಕರಿಸಿತ್ತು. ಅರ್ಜಿದಾರರಾದ ಎಲ್.ರಮ್ಯ ತಮ್ಮ ಪತಿ ದಿ|| ಎನ್.ವೆಂಕಟೇಶ್ ಶಿವಮೊಗ್ಗದ ಮುತ್ತೂಟ್ ಕ್ಯಾಪಿಟಲ್ ಸರ್ವಿಸಸ್ ಲಿ.ನಲ್ಲಿ ಉದ್ಯೋಗಿಯಾಗಿದ್ದು, ಉದ್ಯೋಗದಾತ ಕಂಪನಿಯವರು ಭಾರತಿ ಎಎಕ್ಸ್ಎ ಜನರಲ್ ಇನ್ಶೂರೆನ್ಸ್ ಕಂ.ಲಿ ಹೈದರಾಬಾದ್ ಇವರಿಂದ ತಮ್ಮಲ್ಲಿ ಸೇವೆ ಸಲ್ಲಿಸುತ್ತಿರುವ ಉದ್ಯೋಗಿಗಳಿಗೆ ಗುಂಪು ವಿಮೆ ಖರೀದಿಸಿತ್ತು.
2015 ರಲ್ಲಿ ಮೃತರಾದ ವೆಂಕಟೇಶ್ ಗೆ, ಇನ್ಶೂರೆನ್ಸ್ ಕಂಪನಿಯವರು ತನಿಖಾಧಿಕಾರಿ ವರದಿಯ ಆಧಾರದ ಮೇಲೆ 2011 ರಲ್ಲಿ ಹತ್ಯೆಗೊಂಡ ತುಳಸೀರಾಮ್ ಪ್ರಕರಣದಲ್ಲಿ ವೆಂಕಟೇಶ್ ಆರೋಪಿಯಾಗಿದ್ದು, ಈ ಆಧಾರದ ಮೇಲೆ ವಿಮಾ ಕಂಪನಿ ಹಣ ನೀಡಲು ನಿರಾಕರಿಸಿತ್ತು.
ಜಿಲ್ಲಾ ಆಯೋಗವು ಅರ್ಜಿದಾರರು ಹಾಜರುಪಡಿಸಿದ ದಾಖಲೆಗಳನ್ನು ಪರಿಶೀಲಿಸಿ ಹಾಗೂ ಶಿವಮೊಗ್ಗ 1ನೇ ತ್ವರಿತಗತಿ ನ್ಯಾಯಾಲಯವು ವೆಂಕಟೇಶ್ ನಿರಪರಾಧಿ ಎಂದು ಬಿಡುಗಡೆಗೊಂಡಿರುವುದನ್ನು ಗಮನಿಸಿ, ವಿಮಾ ಕಂಪೆನಿಯವರು ಮೃತರ ಕುಟುಂಬಕ್ಕೆ ಆರೋಪಿ ಎಂಬ ಕಾರಣಕ್ಕೆ ವಿಮೆ ಹಣ ನೀಡಲು ನಿರಾಕರಿಸಿರುವುದು ಸೂಕ್ತವಲ್ಲವೆಂದು ತೀರ್ಪು ನೀಡಿದೆ.
ವಿಮಾ ಕಂಪನಿಯವರಿಗೆ 2ನೇ ಎದುರುದಾರರಾದ ಉದ್ಯೋಗದಾರರಿಂದ ಸೂಕ್ತ ದಾಖಲೆಗಳನ್ನು ತರಿಸಿಕೊಂಡು ಅರ್ಜಿದಾರರಿಗೆ ಅವರ ಮೃತ ಪತಿಗೆ ಸಲ್ಲಬೇಕಾಗಿದ್ದ ರೂ.5,00,000/- ಗಳ ವಿಮಾ ಕ್ಲೇಮನ್ನು/ಪರಿಹಾರವನ್ನು ಸದರಿಯವರ ಮರಣದ ದಿನಾಂಕದಿಂದ ಸಂದಾಯವಾಗುವವರೆಗೆ ವಾರ್ಷಿಕ ಶೇ.9 ರಂತೆ ಬಡ್ಡಿ ಸಮೇತ ಪಾವತಿಸತಕ್ಕದ್ದು ಮತ್ತು ಸೇವಾನ್ಯೂನ್ಯತೆಗೆ ಪರಿಹಾರವಾಗಿ ರೂ.10,000 ಗಳನ್ನು ಆದೇಶವಾದ 45 ದಿನಗಳ ಒಳಗಾಗಿ ನೀಡತಕ್ಕದ್ದೆಂದು ಜಿಲ್ಲಾ ಆಯೋಗದ ಪ್ರಭಾರ ಅಧ್ಯಕ್ಷೆ ಸವಿತಾ.ಬಿ.ಪಟ್ಟಣಶೆಟ್ಟಿ ಮತ್ತು ಸದಸ್ಯರಾದ ಬಿ.ಡಿ.ಯೋಗಾನಂದ ಇವರ ಪೀಠ ತೀರ್ಮಾನ ನೀಡಿದೆ.
