
ಬೆಂಗಳೂರು: ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಪುತ್ರ ಬಿ.ವೈ.ವಿಜಯೇಂದ್ರ ಅವರನ್ನು ವಿಧಾನ ಪರಿಷತ್ ಚುನಾವಣಾ ಅಭ್ಯರ್ಥಿಗಳ ಸಂಭಾವ್ಯ ಪಟ್ಟಿಯಲ್ಲಿ ಸೇರಿಸಿರುವುದು ಬಿಜೆಪಿ ಆಂತರಿಕ ವಲಯದಲ್ಲಿ ತಳಮಳ ಸೃಷ್ಟಿಸಿದೆ. ಕೋರ್ ಕಮಿಟಿಯ ಈ ನಿರ್ಣಯಕ್ಕೆ ರಾಷ್ಟ್ರೀಯ ನಾಯಕರು ಒಪ್ಪಿಗೆಯ ಮುದ್ರೆ ಹಾಕುವರೇ ಎಂಬ ಜಿಜ್ಞಾಸೆ ಈಗ ಆರಂಭವಾಗಿದೆ.
ರಾಜ್ಯ ಬಿಜೆಪಿ ಕೋರ್ ಕಮಿಟಿ ಶಿಫಾರಸ್ಸು ಮಾಡಿದ ಹೆಸರುಗಳು ಹಾಗೂ ನಿರ್ಣಯಗಳನ್ನು ವರಿಷ್ಠರು ತಿರಸ್ಕರಿಸಿದ ಹಲವು ಉದಾಹರಣೆಗಳು ಇವೆ. ಈ ಹಿಂದೆ ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ರಾಜ್ಯಸಭೆಗೆ ಪ್ರಭಾಕರ ಕೋರೆ ಹಾಗೂ ಇನ್ನಿತರರ ಹೆಸರು ಕಳುಹಿಸಿದಾಗ ಹೈಕಮಾಂಡ್ ಅದನ್ನು ನಿರಾಕರಿಸಿತ್ತು. ಈಗ ವಿಜಯೇಂದ್ರ ಸೇರಿದಂತೆ ಇನ್ನಿತರರ ಹೆಸರಿನ ಪಟ್ಟಿಗೆ ಹೈಕಮಾಂಡ್ ಒಪ್ಪುತ್ತದೆಯೇ ಎಂಬುದು ಸದ್ಯದ ಪ್ರಶ್ನೆಯಾಗಿದೆ.
