ಪಿಐ ಸಿದ್ದೇಗೌಡ ಮತ್ತು ಸಿಬ್ಬಂದಿಯ ಮೇಲೆ ಲಾಂಗು ಬೀಸಿದ ಕಿರಾತಕರು -ಓರ್ವ ಅರೆಸ್ಟ್

ಸುದ್ದಿಲೈವ್.ಕಾಂ/ಶಿವಮೊಗ್ಗ
ಡ್ಯೂಟಿ ಮೇಲಿದ್ದ ಪೊಲೀಸ್ ಇನ್ ಸ್ಪೆಕ್ಟರ್ ಮತ್ತು ಸಿಬ್ಬಂದಿಗಳ ಮೇಲೆ ಮದ್ಯ ಸೇವಿಸುತ್ತಿದ್ದ ಹುಡುಗರು ಹಲ್ಲೆ ನಡೆಸಿ ಲಾಂಗಿನಿಂದ ಬೀಸಿರುವ ಘಟನೆ ನಡೆದಿದೆ. ಈ ಸಂಬಂಧ ತುಂಗನಗರ ಪೊಲೀಸರು ಓರ್ವ ಆರೋಪಿಯನ್ನ ಬಂಧಿಸಿದ್ದಾರೆ.
ತಮ್ಮ ಇಲಾಖಾ ವಾಹನದಲ್ಲಿ ರಾತ್ರಿ ರೌಂಡ್ಸ್ ಮತ್ತು ಗಸ್ತು ತಿರುಗುತ್ತಿದ್ದ ಟ್ರಾಫಿಕ್ ಪೊಲೀಸ್ ಇನ್ ಸ್ಪೆಕ್ಟರ್ ಸಿದ್ದೇಗೌಡ ಮತ್ತು ಸಿಬ್ಬಂದಿ ಕೃಷ್ಣಪ್ಪರ ಮೇಲೆ ಮದ್ಯಸೇವಿಸುತ್ತಿದ್ದ ಮಲವಗೊಪ್ಪದ ಪವನ್ ಮತ್ತು ಸಚಿನ್ ಎಂಬ ಯುವಕರು ಲಾಂಗು ಬೀಸಿ ಪರಾರಿಯಾಗಿದ್ದರು.
ಮದ್ಯ ಸೇವಿಸುತ್ತಿದ್ದ ಪವನ್ ಮತ್ತು ಸಚಿನ್
ರಾತ್ರಿ ರೌಂಡ್ಸ್ ವೇಳೆ ಶಿವಮೊಗ್ಗದ ಶುಗರ್ ಫ್ಯಾಕ್ಟರಿ ಬಸ್ ನಿಲ್ದಾಣದಲ್ಲಿ ರಾತ್ರಿ ಹೊತ್ತು ಮದ್ಯ ಸೇವಿಸುತ್ತಿದ್ದ ಮಲವಗೊಪ್ಪದ ನಿವಾಸಿಗಳಾದ ಪವನ್ ಮತ್ತು ಸಚಿನ್ ಗೆ ಇಷ್ಟು ಹೊತ್ತು ರಾತ್ರಿಯಲ್ಲಿ ಸಾರ್ವಜನಿಕ ಸ್ಥಳದಲ್ಲಿ ಕುಡಿಯಬೇಡಿ ಎದ್ದು ಹೋಗಿ ಎಂದು ಸಿದ್ದೇಗೌಡರು ತಿಳಿಮಾತು ಹೇಳಿದ್ದಾರೆ.
ಪೊಲೀಸರಿಗೆ ಅವಾಜ್!
ಇಷ್ಟಕ್ಕೆ ಕುಡಿದ ನಿಶೆಯಲ್ಲಿ ನೀನ್ಯಾವನೋ ನಮಗೆ ಹೇಳೋದಿಕ್ಕೆ ಎಂದು ಅವಾಜ್ ಹಾಕಿದ್ದ ಸಚಿನ್ ಮತ್ತು ಪವನ್ ಕರ್ತವ್ಯದ ಮೇಲಿದ್ದ ಪೊಲೀಸರ ಮೇಲೆ ದರ್ಪ ತೋರಿದ್ದಾರೆ. ವಿಳಾಸ ತಿಳಿದುಕೊಂಡ ಪಿಐ ಸಿದ್ದೇಗೌಡರು ಮತ್ತು ಸಿಬ್ಬಂದಿ ಕೃಷ್ಣಪ್ಪ ಲಾಠಿ ತೋರಿಸಿ ಮನೆಗೆ ಹೋಗಿ ಎಂದು ಹೇಳಿದ್ದಾರೆ.
ಸಿದ್ದೇಗೌಡರ ಮೇಲೆ ಲಾಂಗು ಬೀಸಿದ ಕಿಡಿಗೇಡಿಗಳು
ಈ ವೇಳೆ ಪವನ್ ಕೃಷ್ಣಪ್ಪರ ಲಾಠಿ ಹಿಡಿದು ಅವರ ಮೇಲೆ ಒಂದು ಹೊಡೆತ ಹೊಡೆದು ಲಾಠಿ ಬಿಸಾಕಿ ಓಡಿಹೋಗಲು ಹೊಂಚು ಹಾಕಿದ್ದಾನೆ. ಸಿದ್ದೇಗೌಡರು ಆತನನ್ನ ಹಿಡಿದಿದ್ದಾರೆ. ತಕ್ಷಣವೇ ಪೊದೆಯಲ್ಲಿ ಅಡಗಿಸಿಟ್ಟಿದ್ದ ಲಾಂಗನ್ನ ತಂದ ಸಚಿನ್ ಪವನ್ ನನ್ನ ಬಿಡಲಿಲ್ಲ ಎಂದರೆ ಜೀವ ಸಹಿತ ಬಿಡುವುದಿಲ್ಲವೆಂದು ಗದರಿಸಿ ಲಾಂಗ್ ನ್ನ ಸಿದ್ದಗೌಡರಿಗೆ ಮತ್ತು ಅವರ ಸಿಬ್ಬಂದಿಯ ಮೇಲೆ ಬೀಸಿದ್ದಾನೆ.
ಪಿಎಸ್ಐ ಎಂಟ್ರಿಗೆ ಕಿಡಿಗೇಡಿಗಳು ಪರಾರಿ
ಈ ವೇಳೆ ಪಿಐ ಮತ್ತು ಸಿಬ್ಬಂದಿ ಸಿನಿಮಾ ಶೈಲಿಯಲ್ಲಿ ಪವನ್ ಬೀಸಿದ ಲಾಂಗಿನ ಏಟಿನಿಂದ ತಪ್ಪಿಸಿಕೊಂಡಿದ್ದಾರೆ. ಅಷ್ಟರಲ್ಲೇ ತುಂಗ ನಗರ ಪೊಲೀಸ್ ಠಾಣೆಯ ಪಿಎಸ್ಐ ಶಿವಪ್ರಸಾದ್ ಎಂಟ್ರಿಕೊಡುತ್ತಿದ್ದಂತೆ ಪವನ್ ಮತ್ತು ಸಚಿನ್ ಎಸ್ಕೇಪ್ ಆಗಿದ್ದಾರೆ. ಎಲ್ಲಡೆ ಹುಡುಕಿದರೂ ಇಬ್ಬರೂ ಪತ್ತೆಯಾಗಿಲ್ಲ. ಮರುದಿನ ಸಚಿನ್ ಎಂಬಾತನನ್ನ ಪೊಲೀಸರು ಬಂಧಿಸಿ ಹೆಡೆಮುರಿಕಟ್ಟಿದ್ದಾರೆ.
