ಸುದ್ದಿಲೈವ್.ಕಾಂ/ಸಾಗರ

ಕಾಂಗ್ರೇಸ್ ಪಕ್ಷದಲ್ಲಿ ಎಲ್ಲವೂ ಸರಿಯಿಲ್ಲ. ಮುಂದಿನ ವಿಧಾನಸಭಾ ಚುನಾವಣೆ ಹಿನ್ನೆಲೆ ಇರಿಸಿಕೊಂಡು ಕಾಂಗ್ರೇಸ್ ಪಕ್ಷದಲ್ಲಿ ಪರಸ್ಪರ ಕಾಲೇಳೆಯುವ ಕೆಲಸ ನಡೆಯುತ್ತಿದೆ.

ರಾಜ್ಯಮಟ್ಟದಲ್ಲಿ ಪರಸ್ಪರ ಮೇಲಾಟಕ್ಕೆ ಕಾಂಗ್ರೇಸ್ ಮುಖಂಡರು ತೊಡಗಿಕೊಂಡಿರುವ ಬೆನ್ನಲ್ಲಿಯೆ ಸಾಗರ ಕಾಂಗ್ರೇಸ್ ಸಹ ಇದರಿಂದ ಹೊರತಾಗಿಲ್ಲ. ಈ ಮೇಲ್ಪಂಕ್ತಿ ಸಾಧಿಸುವ ಇರಾದೆಯೀಗ ಕೈ ಜಗಳ ಹಾದಿರಂಪ ಬೀದಿರಂಪ ಆಗುವಂತೆ ಮಾಡಿದ್ದು, ಮಾಜಿ ಶಾಸಕರೊಬ್ಬರು ಮಾಜಿ ಸಂಸದರ ಪುತ್ರನ ಮೇಲೆ ಕೈ ಮಾಡುವ ಹಂತಕ್ಕೆ ಬಂದು ತಲುಪಿದೆ.

ಇಲ್ಲಿನ ಜೋಸೆಫ್ ನಗರದಲ್ಲಿರುವ ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಅವರ ಮನೆಯಲ್ಲಿ ಶನಿವಾರ ರಾತ್ರಿ ಇಂತಹದ್ದೊಂದು ಹೈಡ್ರಾಮ ನಡೆದಿದ್ದು, ಮಾಜಿ ಶಾಸಕ ಗೋಪಾಲಕೃಷ್ಣ ಬೇಳೂರು ಮತ್ತು ಮಾಜಿ ಸಂಸದರಾಗಿದ್ದ ಕೆ.ಜಿ.ಶಿವಪ್ಪ ಅವರ ಪುತ್ರ ಕೆ.ಎಸ್.ಪ್ರಶಾಂತ್ ನಡುವೆ ಮಾತಿನ ಚಕಮಕಿ ನಡೆದು, ಅಂತಿಮವಾಗಿ ಬೇಳೂರು ಕೋಪಗೊಂಡು ಪ್ರಶಾಂತ್ ಅವರ ಮೇಲೆ ಹಲ್ಲೆಗೆ ಮುಂದಾದ ಘಟನೆ ಸಹ ನಡೆದಿದೆ ಎನ್ನಲಾಗುತ್ತಿದೆ.

ಗಾಂಧಿ ಜಯಂತಿ ಅಂಗವಾಗಿ ಸಭೆ :

ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಅವರ ಮನೆಯಲ್ಲಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಆಯೋಜಿಸಲಾಗುತ್ತಿರುವ ಗಾಂಧಿ ಜಯಂತಿ ಮತ್ತು ಪಕ್ಷ ಸಂಘಟನೆ ವಿಷಯದಲ್ಲಿ ದಿಢೀರನೇ ಶನಿವಾರ ರಾತ್ರಿ ಆನಂದಪುರಂ ಮತ್ತು ತ್ಯಾಗರ್ತಿ ಹೋಬಳಿ ಪ್ರಮುಖರ ಸಭೆ ಕರೆಯಲಾಗಿತ್ತು.

ಸಭೆಯಲ್ಲಿ ಮಾಜಿ ಸಚಿವ ಕಾಗೋಡು ತಿಮ್ಮಪ್ಪ, ಮಾಜಿ ಶಾಸಕ ಮತ್ತು ಕೆಪಿಸಿಸಿ ವಕ್ತಾರ ಗೋಪಾಲಕೃಷ್ಣ ಬೇಳೂರು, ಕೆಪಿಸಿಸಿ ಕಾರ್ಯದರ್ಶಿ ಡಾ. ರಾಜನಂದಿನಿ ಕಾಗೋಡು, ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯ ರತ್ನಾಕರ ಹೊನಗೋಡು, ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಬಿ.ಆರ್.ಜಯಂತ್, ಎಪಿಸಿಎಂಸಿ ಸದಸ್ಯರಾದ ಮಂಡಗಳಲೆ ಹುಚ್ಚಪ್ಪ, ಭರ್ಮಪ್ಪ ಅಂದಾಸುರ ಸೇರಿದಂತೆ ಅನೇಕ ಪ್ರಮುಖರು ಪಾಲ್ಗೊಂಡಿದ್ದರು.

ಸಭೆಯಲ್ಲಿ ಚರ್ಚೆ ನಡೆಯುತ್ತಿರುವ ಸಂದರ್ಭದಲ್ಲಿ ಮಾಜಿ ಸಂಸದ ಕೆ.ಜಿ.ಶಿವಪ್ಪ ಅವರ ಪುತ್ರ ಕಾಂಗ್ರೇಸ್ ಪ್ರಮುಖರಾದ ಪ್ರಶಾಂತ್ ಮಾತನಾಡಲು ನಿಂತಿದ್ದಾರೆ. ಈ ಸಂದರ್ಭದಲ್ಲಿ ಬೇಳೂರು ಗೋಪಾಲಕೃಷ್ಣ ತಾವು ಮಾತನಾಡಲು ಮುಂದಾಗಿದ್ದಾರೆ. ಈ ಸಂದರ್ಭದಲ್ಲಿ ಇಬ್ಬರ ನಡುವೆ ಏಕವಚನ ಪದಪ್ರಯೋಗ ನಡೆದಿದೆ. ಈ ಸಂದರ್ಭದಲ್ಲಿ ಆಕ್ರೋಶಗೊಂಡ ಬೇಳೂರು ಪ್ರಶಾಂತ ಅವರ ಮೇಲೆ ಹಲ್ಲೆಗೆ ಮುಂದಾಗಿದ್ದು, ಸಭೆಯಲ್ಲಿದ್ದವರು ಇಬ್ಬರನ್ನೂ ಸಮಾಧಾನಪಡಿಸಿದ್ದಾರೆ. ಸಭೆಯಲ್ಲಿ ಕ್ಷಣಕಾಲ ಗೊಂದಲ ಸೃಷ್ಟಿಯಾಗಿದ್ದು, ಸಭೆ ಬರಕಾಸ್ತು ಮಾಡಲಾಗಿದೆ.

ಬೇಳೂರು ವಿರುದ್ದ ಆಕ್ರೋಶ :

ಪಕ್ಷ ಸಂಘಟನೆ ಕುರಿತು ಕರೆಯಲಾಗಿದ್ದ ಸಭೆಯಲ್ಲಿ ಬೇಳೂರು ಅತಿರೇಕದ ವರ್ತನೆ ತೋರಿಸಿದ್ದಾರೆಂದು ಕಾಂಗ್ರೇಸ್‍ನ ಕೆಲವು ಪ್ರಮುಖರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಾಜಿ ಸಚಿವರು ಹಾಗೂ ಹಿರಿಯ ರಾಜಕೀಯ ಮುತ್ಸದಿ ಕಾಗೋಡು ತಿಮ್ಮಪ್ಪ ಅವರ ಎದುರೇ ಪಕ್ಷದ ಮುಖಂಡ ಪ್ರಶಾಂತ್ ಅವರ ಮೇಲೆ ಹಲ್ಲೆಗೆ ಮುಂದಾಗಿರುವ ಕ್ರಮ ಸರಿಯಲ್ಲ ಎನ್ನುವುದು ಕಾಂಗ್ರೇಸ್ಸಿಗರ ಆರೋಪವಾಗಿದೆ.

ಈ ಹಿನ್ನೆಲೆಯಲ್ಲಿ ಸದ್ಯದಲ್ಲಿಯೆ ಕಾಗೋಡು ತಿಮ್ಮಪ್ಪ ಅಭಿಮಾನಿ ಬಳಗದ ಸಭೆ ಕರೆದು ಬೇಳೂರು ಕೃತ್ಯವನ್ನು ಖಂಡಿಸುವ ಜೊತೆಗೆ ಗೋಪಾಲಕೃಷ್ಣ ಬೇಳೂರು ವಿರುದ್ದ ಕೆಪಿಸಿಸಿಗೆ ದೂರು ನೀಡುವ ನಿರ್ಣಯ ಕೈಗೊಳ್ಳಲಾಗುತ್ತಿದೆ ಎನ್ನಲಾಗಿದೆ. ಈ ನಿಟ್ಟಿನಲ್ಲಿ ಸಭೆಯ ಸಿದ್ದತೆಯಲ್ಲಿ ಕೆಲವರು ತೊಡಗಿಕೊಂಡಿದ್ದಾರೆ.

Share to this News
  •  
  •  
  •  
  •  
  •  
  •  
  •  
  •  
  •  
  •  

LEAVE A REPLY

Please enter your comment!
Please enter your name here